ಪ್ರವರ್ಗ 2 (ಎ) ಮತ್ತು ಓಬಿಸಿ ಮೀಸಲಾತಿ ಪಡೆಯಲು ಪಂಚಮಸಾಲಿ ಸಮುದಾಯಕ್ಕೆ ಎಲ್ಲಾ ಅರ್ಹತೆಯಿದೆ: ವಚನಾನಂದ ಸ್ವಾಮೀಜಿಗಳು
ವಿಕಾಸಸೌಧದಲ್ಲಿ ಮೀಸಲಾತಿ ಪರಾಮರ್ಶಿಸುವ ಉನ್ನತ ಮಟ್ಟದ ಸಮಿತಿಯ ಮುಂದೆ ವಾದ

-ಪಂಚಮಸಾಲಿ ಮಠಾಧೀಶರ ಒಕ್ಕೂಟದ ಷ ಬ್ರ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬಬಲೇಶ್ವರ, ಶ್ರೀ ಷ ಬ್ರ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ,ಮನಗೂಳಿ ಹಾಗೂ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಇನ್ನಿತರ ಮಠಾಧೀಶರುಗಳು ಭಾಗಿ
-ಪಂಚಮಸಾಲಿ ಸಮಾಜದ ಹಿರಿಯರನ್ನ ಒಳಗೊಂಡ ನಿಯೋಗ ಕಚೇರಿಗೆ ಭೇಟಿ
-ವಕೀಲರಾದ ಶ್ರೀ. ಬಿ.ಎಸ್‌ ಪಾಟೀಲರಿಂದ ದಾಖಲೆಗಳ ಸಮರ್ಪಣೆ

ಬೆಂಗಳೂರು ಡಿಸೆಂಬರ್‌ 06: ರಾಜ್ಯದ ಪ್ರಮುಖ ಕೃಷಿಕ ಸಮುದಾಯವಾದ ಪಂಚಮಸಾಲಿ ಸಮುದಾಯ, ಪ್ರವರ್ಗ 2 (ಎ) ಹಾಗೂ ಓಬಿಸಿ ಮೀಸಲಾತಿ ಪಡೆಯಲು ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀ ಸುಭಾಷ್‌ ಆಡಿ ಅವರ ನೇತೃತ್ವದ ಸಮಿತಿ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಭರವಸೆ ವ್ಯಕ್ತಪಡಿಸಿದರು.

ಸೋಮವಾರ ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ 7 ರಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ರೀ ಸುಭಾಷ್‌ ಅಡಿ ಅವರ ಮೀಸಲಾತಿ ಪರಮಾರ್ಶಿಸುವ ಉನ್ನತ ಮಟ್ಟದ ಸಮಿತಿಯ ಮುಂದೆ ಸಮರ್ಥವಾದ ಮಂಡಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಇಂದು ನಿವೃತ್ತ ನ್ಯಾಯಮೂರ್ತಿ ಶ್ರೀ ಸುಭಾಷ್‌ ಅಡಿ ಅವರ ಮೀಸಲಾತಿ ಪರಾಮರ್ಶಿಸುವ ಉನ್ನತ ಸಮಿತಿ ನಮ್ಮ ವಾದವನ್ನು ಮಂಡಿಸುವಂತೆ ಆಹ್ವಾನ ನೀಡಿತ್ತು. ಈ ನಿಟ್ಟಿನಲ್ಲಿ ರಾಜ್ಯದ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಮಠಾಧೀಶರುಗಳು, ಬಬಲೇಶ್ವರದ ಶ್ರೀ ಷ ಬ್ರ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಮನಗೂಳಿಯ ಶ್ರೀ ಷ ಬ್ರ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಮಸಾಲಿ ಸಮುದಾಯದ ಹಿರಿಯರು ನೇತೃತ್ವದ ನಿಯೋಗ ಇಂದು ಭೇಟಿ ನೀಡಿ ನಮ್ಮ ವಾದ ಹಾಗೂ ಸೂಕ್ತ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದೇವೆ.

ಪ್ರಮುಖ ಕೃಷಿಕ ಸಮುದಾಯ ಆಗಿರುವ ಪಂಚಮಸಾಲಿಗಳಿಗೆ ಯಾವುದೇ ಮೀಸಲಾತಿ ಸಿಕ್ಕಿಲ್ಲ. ಲಿಂಗಾಯತ ಸಮುದಾಯದ ಇತರೆ ಉಪಪಂಗಡಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಪ್ರವರ್ಗ 2 (ಎ) ನಲ್ಲಿ ಅಥವಾ ಇತ್ತೀಚೆಗೆ ರಾಜ್ಯ ಸರಕಾರಗಳಿಗೆ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಅಧಿಕಾರವನ್ನು ಬಳಸಿಕೊಂಡು ಓಬಿಸಿ ಮೀಸಲಾತಿಯನ್ನ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸಮಿತಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ವಚನಾನಂದ ಸ್ವಾಮೀಜಿಗಳು ತಿಳಿಸಿದರು.

ಹಿರಿಯ ವಕೀಲರಾದ ಬಿ.ಎಸ್‌ ಪಾಟೀಲ್‌ ಮಾತನಾಡಿ, 1871 ರಿಂದ ಇಲ್ಲಿಯವರೆಗಿನ ಸುಮಾರು 35 ಕ್ಕೂ ಹೆಚ್ಚು ದಾಖಲೆಗಳನ್ನು ನಾವು ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದ ಸಮಿತಿಗೆ ನೀಡಿದ್ದೇವೆ. ಹಲವಾರು ದಶಕಗಳ ಬೇಡಿಕೆಯ ಫಲವಾಗಿ ಸರಕಾರ ಇಂದು ಸಮಿತಿಯನ್ನು ರಚನೆ ಮಾಡಿದೆ. ಅಲ್ಲದೆ, ಕೇಂದ್ರ ಸರಕಾರದ ಓಬಿಸಿ ಪಟ್ಟಿಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸುವಂತೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಓಬಿಸಿ ಪಟ್ಟಿಗೆ ಸೇರ್ಪಡೆಯ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಅರ್ಜಿಗಳು ರಾಜ್ಯಸರಕಾರಕ್ಕೆ ವರ್ಗಾವಣೆ ಆಗಿದ್ದು ಓಬಿಸಿ ಮೀಸಲಾತಿ ಸಿಗುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.

ಗಮನ ಸೆಳೆದ ಪಂಚಮಸಾಲಿ ಮಠಾಧೀಶರುಗಳ ಉಪಸ್ಥಿತಿ:
ರಾಜ್ಯದ ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸುವ ಸುಮಾರು 15 ಕ್ಕೂ ಹೆಚ್ಚು ಸ್ವಾಮೀಜಿಗಳು ನಿಯೋಗದಲ್ಲಿ ಪಾಲ್ಗೊಂಡಿದ್ದರು. ಪ್ರಮುಖವಾಗಿ, ಷ ಬ್ರ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬಬಲೇಶ್ವರ, ಶ್ರೀ ಷ ಬ್ರ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಮನಗೂಳಿ,ಶ್ರೀ ಬಸವರಾಜ ದಿಂಡೂರ,ಶ್ರೀ ಸೋಮನಗೌಡ ಪಾಟೀಲ,ಶ್ರೀ ಚಂದ್ರಶೇಖರ ಪೂಜಾರ,ಶ್ರೀಮತಿ ವಸಂತ ಹುಲ್ಲತ್ತಿ ಸಭೆಯಲ್ಲಿ ಉಪಸ್ಥಿತರಿದ್ದರು. ಒಗ್ಗಟ್ಟಿನಲ್ಲಿ ತಮ್ಮ ವಾದವನ್ನು ಮಂಡಿಸಿದ್ದು ಎಲ್ಲರ ಗಮನ ಸೆಳೆಯಿತು.