.

 

ಯುವ ಪೀಳಿಗೆಯಲ್ಲಿ ಒಳ್ಳೆಯ ಅಭ್ಯಾಸಗಳನ್ನು ಬೆಳೆಸುವ ಗುರಿಯಲ್ಲಿ ಹರಮಾಲೆ ಯಶಸ್ವಿಯಾಗಲಿ: ಸಿಎಂ ಬಸವರಾಜ್‌ ಬೊಮ್ಮಾಯಿ ಹರಿಹರ ಜಗದ್ಗುರು ಪೀಠದಿಂದ ಪ್ರಾರಂಭಿಸಲಾಗಿರುವ ಹರಮಾಲಾ ಯಾತ್ರೆಯ ಲೋಗೋ ಹಾಗು ಬ್ಯಾನರ್‌ ಬಿಡುಗಡೆ

ಬೆಂಗಳೂರು ಡಿಸೆಂಬರ್‌ 09: ಹರಜಾತ್ರೆಯಲ್ಲಿ ಪಾಲ್ಗೊಳ್ಳುವ ಯುವ ಹಾಗೂ ಉತ್ಸಾಹಿ ಜನರಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವ ಹಾಗೂ ಮಾನಸಿಕ ಸ್ಥೈರ್ಯಗಳನ್ನು ಹೆಚ್ಚಿಸುವ ಉದ್ದೇಶದಲ್ಲಿ ಹರಮಾಲೆ ಯಶಸ್ವಿಯಾಗಲಿ ಎಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾರೈಸಿದರು.


ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಹರಿಹರ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಹರಮಾಲೆ ಕಾರ್ಯಕ್ರಮದ ಲೋಗೋ ಹಾಗೂ ಬ್ಯಾನರ್‌ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸುವ, ಪರಂಪರೆಯನ್ನು ಮುಂದುವರೆಸುವ ಹಾಗೂ ಹೊಸತನ್ನು ತಿಳಿಸಿಕೊಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಹರಜಾತ್ರೆಯ ಮೂಲಕ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಒಗ್ಗೂಡಿಸಿ ಹಲವಾರು ಅತ್ಯವಶ್ಯಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಬಾರಿ ಸಮುದಾಯದ ಉತ್ಸಾಹಿ ಯುವಕರಲ್ಲಿ ಮತ್ತಷ್ಟು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ, ಒಳ್ಳೆಯ ಅಭ್ಯಾಸಗಳನ್ನು ಅವರ ಜೀವನದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹರಮಾಲೆ ವೃತವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದಾರೆ. ಈ ವೃತದಲ್ಲಿ ನಿಷ್ಠರಾಗಿ ಪಾಲ್ಗೊಳ್ಳುವ ಮೂಲಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಯುವಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.


ಹರಿಹರ ಜಗದ್ಗುರು ಪೀಠದ ವಚನಾನಂದ ಮಹಾಸ್ವಾಮೀಜಿಗಳು ಮಾತನಾಡಿ, ಅಂಧಕಾರವನ್ನು ಹೋಗಲಾಡಿಸುವ ಜವಾಬ್ದಾರಿ ಎಲ್ಲಾ ಗುರುಪೀಠದ್ದಾಗಿರುತ್ತದೆ. ಜಗದ್ಗುರುಗಳದ್ದಾಗಿರುತ್ತದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಎಲ್ಲಾ ಸ್ವಾಮೀಜಿಗಳ ಮೂಲ ಕರ್ತವ್ಯ. ಹರಿಹರ ಪಂಚಮಸಾಲಿ ಜಗದ್ಗುರು ಪೀಠ ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟು ಸಾಗುತ್ತಿದೆ. ಕೇವಲ ಪಂಚಮಸಾಲಿಗಳಲ್ಲ ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನ ಹರಿಹರ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಬಂದು ಹರನನ್ನ ಭಕ್ತಿಯಿಂದ ಆರಾಧಿಸುತ್ತಾರೆ. ಜಗದ್ಗುರು ಮಹಾಸನ್ನಿಧಿಯವರ ಆಶೀರ್ವಾದ ಪಡೆಯುತ್ತಾರೆ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಕೈಂಕರ್ಯದಲ್ಲಿ ನಮ್ಮದು ಅಳಿಲು ಸೇವೆಯಾಗಿದೆ.


ನಾವು ಪೀಠಕ್ಕೆ ಬರುವ ಸಾವಿರ ಸಾವಿರ ಯುವಮನಸುಗಳನ್ನು ಬಹಳ ಹತ್ತಿರದಿಂದ ಗಮನಿಸಿದ್ದೇವೆ. ಅವರಲ್ಲಿ ಅಪಾರ ಬುದ್ಧಿ ಶಕ್ತಿ ಇರುತ್ತದೆ. ಯುಕ್ತಿ ಇರುತ್ತದೆ. ಪ್ರತಿಭೆಯ ಜೊತೆಗೆ ಏನಾದರೂ ಸಾಧಿಸಬೇಕು ಅನ್ನೋ ಅತೀವ ಹಂಬಲವಿರುತ್ತದೆ. ಆದರೆ ಕೆಲವರು ಬೇಕೋಬೇಡವೋ ಯಾವುದೋ ಒಂದು ಚಟಕ್ಕೆ ದಾಸರಾಗಿರುತ್ತಾರೆ. ಮಾನಸಿಕವಾಗಿ ಸ್ಥೈರ್ಯ ಗುಂದಿರುತ್ತಾರೆ. ಸಣ್ಣಪುಟ್ಟ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುತ್ತಾರೆ. ಅಂತಃಕರಣ, ಪ್ರೀತಿ ಗೌರವ ಕಳೆದುಕೊಂಡಿರುತ್ತಾರೆ. ಅಯ್ಯೋ ನನಗಿನ್ನೂ ಯಶಸ್ಸು ಸಿಕ್ಕಿಲ್ಲವಲ್ಲ ಅಂತ ಹಪಹಪಿಸುತ್ತಿರುತ್ತಾರೆ. ಜೀವನದ ಹೊಸ್ತಿಲಿನಲ್ಲೇ ಗೊಂದಲಕ್ಕೀಡಾಗಿರುವ ಅಂಥ ಲಕ್ಷಲಕ್ಷ ಯುವಮನಸುಗಳನ್ನು ಸರಿದಾರಿಗೆ ತರುವ ಹೊಣೆ ನಮ್ಮ ಮೇಲಿದೆ. ಅಧ್ಯಾತ್ಮದ ತೆಕ್ಕೆಗೆ ಅವರನ್ನು ತಂದು, ಹರಸಂಕಲ್ಪ ಮಾಡಿಸಿ ಜೀವನ ಪಯಣಕ್ಕೆ ಹೊಸ ದಾರಿ ತೋರಿಸಬೇಕು. ಆ ಹೊಣೆಯನ್ನು ಅರಿತೇ ನಾವು ಪವಿತ್ರವಾದ ಹರಜಾತ್ರಾ ಮಹೋತ್ಸವದಂದು ಹರಮಾಲೆ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ.


ಹರಮಾಲೆ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಮತ್ತೊಂದು ದೂರದೃಷ್ಟಿಯ ಸಂಕಲ್ಪ. ಸಾಮಾಜಿಕ ಬದಲಾವಣೆಯಲ್ಲಿ ಹರಮಾಲೆ ಬಹಳ ದೊಡ್ಡ ಪಾತ್ರ ವಹಿಸುತ್ತದೆ ಎಂದೇ ನಾವು ನಂಬಿದ್ದೇವೆ. ನಡತೆ ತಪ್ಪಿದವರನ್ನು ತಿದ್ದುವ, ದುಶ್ಚಟಗಳಿಗೆ ದಾಸರಾದವರನ್ನು ಅದರಿಂದ ಮುಕ್ತಿಗೊಳಿಸುವ, ಧೂಮಪಾನ- ಮದ್ಯಪಾನದಂಥ ಸಾಮಾಜಿಕ ಪಿಡುಗುಗಳಿಗೆ ತಿಲಾಂಜಲಿ ಇಡುವ, ಎಲ್ಲಕ್ಕಿಂತ ಹೆಚ್ಚಾಗಿ ಸಮಾಜವನ್ನು ಒಳ್ಳೆಯ ಮನಸ್ಸುಗಳಿಂದ ನಿರ್ಮಿಸುವ, ಆತ್ಮಶುದ್ಧೀಕರಿಸುವ ಮಹಾಸಂಕಲ್ಪ ಹರಜಾತ್ರೆಯ ಹಿಂದಿದೆ. ಅದಕ್ಕಾಗಿ ಯುವಮನಸುಗಳು ೨೧ ದಿನಗಳ ಕಾಲ ಅತ್ಯಂತ ಕಟ್ಟುನಿಟ್ಟಾಗಿ ಹರಮಾಲೆ ವ್ರತವನ್ನು ಕೈಗೊಳ್ಳಬೇಕು. ಹರನಿಗೆ ಭಕ್ತಿ ನಿಷ್ಟೆಯಿಂದ ಕಾಯಾ ವಾಚಾ ಮನಸಾ ನಡೆದುಕೊಳ್ಳಬೇಕು. ಆಗಮಾತ್ರ ಸಂಕಲ್ಪ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಶ್ರೀ ಬಿ.ನಾಗನಗೌಡರು, ನಿಕಟಪೂರ್ವ ರಾಜ್ಯಾಧ್ಯಕ್ಷ ಶ್ರೀ ಬಸವರಾಜ್ ದಿಂಡೂರು,


ಪಂಚಮಸಾಲಿ ಪೀಠ ಪ್ರಧಾನ ಧರ್ಮದರ್ಶಿ ಶ್ರೀ ಬಿ.ಸಿ.ಉಮಾಪತಿ,ಪ್ರಧಾನ ಕಾರ್ಯದರ್ಶಿ ಶ್ರೀ ಸಿದ್ದೇಶ ಹನಶಿ,ಶ್ರೀ ಚಂದ್ರಶೇಖರ ಪೂಜಾರ,ಶ್ರೀ ಸೋಮನಗೌಡ ಪಾಟೀಲ,ಶ್ರೀಮತಿ ವಸಂತ ಹುಲ್ಲತ್ತಿ ,ವಕೀಲರಾದ ಶ್ರೀ ಬಿ.ಎಸ್.ಪಾಟೀಲರು ಮುಂತಾದವರು ಉಪಸ್ಥಿತರಿದ್ದರು.