ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು

ಇಂದು ಸನ್ಮಾನ್ಯ ಉಪರಾಷ್ಟ್ರಪತಿಗಳಾದ ಶ್ರೀ ವೆಂಕಯ್ಯನಾಯ್ಡು ಅವರು ನಮಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಹಳ ಹೊತ್ತು ತಮ್ಮ ಪ್ರೀತಿ ಹಾಗೂ ಆದರದ ಮಾತುಗಳಿಂದ ಸತ್ಕರಿಸಿದರು. ಅಲ್ಲದೆ, ಓಮಿಕ್ರಾನ್‌ ಭೀತಿ ಕಡಿಮೆ ಆದ ನಂತರ ಸಂಸತ್‌ ಭವನಕ್ಕೆ ಆಹ್ವಾನಿಸಿದ್ದು ಹಾಗೆಯೇ ಹರಿಹರ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದು ಬಹಳ ಸಂತಸ ತಂದಿತು.

ಇದೇ ತಿಂಗಳ 14 ಮತ್ತು 15 ರಂದು ಹರಕ್ಷೇತ್ರ ಹರಿಹರದಲ್ಲಿ ಆಯೋಜಿಸಲಾಗಿರುವ ಹರಜಾತ್ರೆಗೆ ಉಪರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರ ತಲುಪಿದ ನಂತರ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೊಶಿ ಅವರಿಂದ ನಮ್ಮ ಬಗ್ಗೆ ಹಾಗೂ ಪಂಚಮಸಾಲಿ ಜಗದ್ಗುರು ಪೀಠದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದರು ಎನ್ನುವುದು ತಿಳಿಯಿತು.

ಅಜಾದಿ ಕಾ ಅಮೃತ್‌ ಮಹೋತ್ಸವ ಹಿನ್ನಲೆಯಲ್ಲಿ ಪಂಚಮಸಾಲಿ ಸಮಾಜ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ನಮ್ಮಿಂದ ಉಪರಾಷ್ಟ್ರಪತಿಯವರು ಮಾಹಿತಿ ಪಡೆದರು. ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಹೀಗೆ ಪಂಚಮಸಾಲಿ ಸಮಾಜದ ವೀರ ಮಹಿಳೆಯರ ಬಗ್ಗೆಯೂ ಮಾಹಿತಿಯನ್ನು ನೀಡಿದೆವು. ಹಾಗೆಯೇ, ರಾಜ್ಯದಲ್ಲಿ 85ಲಕ್ಷ ಹಾಗೂ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದಲ್ಲಿ ಒಂದು ಕೋಟಿ 50 ಲಕ್ಷ ಪಂಚಮಸಾಲಿಗಳಿರುವ ಬಗ್ಗೆ ಉಪರಾಷ್ಟ್ರಪತಿಗಳಿಗೆ ತಿಳಿಸಲಾಯಿತು.

ಸದ್ಯ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ‌. ಇದೇ ತಿಂಗಳು 14 ಮತ್ತು 15 ರಂದು ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಆಯೋಜಿಸಿರುವ ಹರಜಾತ್ರೆ ಮುಂದೂಡುವಂತೆ ಉಪರಾಷ್ಟ್ರಪತಿಯವರು ಸಲಹೆ ನೀಡಿದ್ದಾರೆ. ಅಲ್ಲದೆ, ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರಕ್ಕೆ ಬರುವುದಾಗಿ ನಮಗೆ ಭರವಸೆಯನ್ನು ನೀಡಿದ್ದಾರೆ.

ಅವರ ಕಾಳಜಿ ಹಾಗೂ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.