ಹನಗವಾಡಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶುಕ್ರವಾರ ವಚನಾನಂದ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ, ಹರ ಹಾಗೂ ನಂದೀಶ್ವರ ಪ್ರಾಣ ಪ್ರತಿಷ್ಠಾಪನೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ನಡೆಯಿತು

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಸಂಗನಬಸವ ಅನ್ನದಾನೇಶ್ವರ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಭಾಗವಹಿಸಿದ್ದರು.    

                   

ಹರಿಹರ: ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶುಕ್ರವಾರ ವಚನಾನಂದ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ, ಹರ ಹಾಗೂ ನಂದೀಶ್ವರ ಪ್ರಾಣ ಪ್ರತಿಷ್ಠಾಪನೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯದಂತೆ ನಡೆಯಿತು.

ಬೆಳಿಗ್ಗೆ 6.50ಕ್ಕೆ ವಚನಾನಂದ ಸ್ವಾಮೀಜಿ, ಶಿವಯೋಗಿ ಮಂದಿರದ ಡಾ. ಸಂಗನಬಸವ ಅನ್ನದಾನೇಶ್ವರ ಸ್ವಾಮೀಜಿ ಸೇರಿ ಹಲವು ಪೀಠಗಳ ಸ್ವಾಮೀಜಿ ಪೀಠಕ್ಕೆ ಬಂದರು. ಪೀಠದ ಧರ್ಮದರ್ಶಿಗಳು, ಪಂಚಮಸಾಲಿ ಸಮಾಜದ ಮುಖಂಡರು, ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ನಂದಿಕೋಲು ಹಾಗೂ ಮಂಗಳವಾದ್ಯ ತಂಡಗಳು ಪಾಲ್ಗೊಂಡಿದ್ದರು.

ಬೆಳಿಗ್ಗೆ 7.05ಕ್ಕೆ ಹರ ದೇವಸ್ಥಾನದ ಆವರಣದಲ್ಲಿ ವಚನಾನಂದ ಸ್ವಾಮೀಜಿ ಗೋಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನಕ್ಕೆ ಬಂದು ನಂದೀಶ್ವರ ಹಾಗೂ ಹರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಗುರುನಿವಾಸದ ಪೂಜೆ ಹಾಗೂ ಗೃಹಪ್ರವೇಶ ಕಾರ್ಯಕ್ರಮ ನಡೆಯಿತು.

ಬಳಿಕ 7.45ಕ್ಕೆ ನೂತನ ಗುರುನಿವಾಸದಲ್ಲಿ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕದ ಧಾರ್ಮಿಕ ವಿಧಿವಿಧಾನಗಳು ಶುರುವಾಯಿತು. ವಚನಾನಂದ ಸ್ವಾಮೀಜಿ ಪೂರ್ವಾಶ್ರಮದ ತಂದೆ–ತಾಯಿಯಿಂದ ಸನ್ಮಾನ ಸ್ವೀಕಾರಕ್ಕೆ ಒಪ್ಪಿಗೆ ಪಡೆದರು. ಲೌಕಿಕ ಜೀವನದ ಸಂಬಂಧ ಕಲ್ಪಿಸುವ ಉಡಿದಾರ ಬಿಡಿಸಿದರು. ಹಾಲುತುಪ್ಪದ ಅಭಿಷೇಕ, ಕೇಶಮುಂಡನ ನಡೆಯಿತು.

ಸ್ನಾನಾಭಿಷೇಕದ ಬಳಿಕ ವಚನಾನಂದ ಸ್ವಾಮೀಜಿ ಹಾಗೂ ಪೀಠದ ಟ್ರಸ್ಟ್‌ನ ನಿರ್ದೇಶಕರು ಪರಸ್ಪರ ಪ್ರಮಾಣ ವಚನ ಸ್ವೀಕರಿಸಿದರು. ಪೀಠದ ಜಗದ್ಗುರು ಸ್ಥಾನಕ್ಕೆ ಪಟ್ಟಾಭಿಷೇಕವಾಗಲಿರುವ ಶ್ರೀಗಳಿಗೆ ಸನ್ಯಾಸ ದೀಕ್ಷೆ ನೀಡುವಂತೆ ನಿರ್ದೇಶಕರು, ವಿವಿಧ ಪೀಠಗಳ ಸ್ವಾಮೀಜಿಗಳಿಗೆ ಭಿನ್ನವತ್ತಳೆ ಅರ್ಪಿಸಿದರು. ಅನ್ನದಾನೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ವೀರಶೈವ ಸಂಪ್ರದಾಯದಂತೆ ಸುಮಾರು ಒಂದೂವರೆ ಗಂಟೆ ಕಾಲ ದೀಕ್ಷಾ ಸಮಾರಂಭ ಜರುಗಿತು. ದಿಂಗಾಲೇಶ್ವರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಹುಬ್ಬಳ್ಳಿಯ ನಿರಂಜನಾನಂದ ಸ್ವಾಮೀಜಿ, ಶ್ರೀರಂಗ ಪಟ್ಟಣದ ತ್ರಿನೇತ್ರ ಸ್ವಾಮೀಜಿ, ಹಗರಿಬೊಮ್ಮನಹಳ್ಳಿಯ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಒಳಬಳ್ಳಾರಿಯ ತಾತ, ಕೈವಲ್ಯ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ ಹಾಜರಿದ್ದರು. ಪೀಠದ ಟ್ರಸ್ಟ್‌ ಧರ್ಮದರ್ಶಿ ಬಿ.ಸಿ. ಉಮಾಪತಿ, ಬಾವಿ ಬೆಟ್ಟಪ್ಪ, ಚಂದ್ರಶೇಖರ್ ಪೂಜಾರ್, ಬಸವರಾಜ್ ದಿಂಡೂರ್‌, ಪಿ.ಡಿ. ಶಿರೂರ, ಪಂಚಮಸಾಲಿ ಸಮಾಜದ ಮುಖಂಡರು ಹಾಜರಿದ್ದರು.

‘ಗಾಳಿಪಟದಂತೆ ಸ್ವಚ್ಛಂದವಾಗಿ ತಿರುಗಾಡಿಕೊಂಡಿದ್ದ ನನಗೆ ಹರಿಹರದ ಪಂಚಮಸಾಲಿ ಪೀಠವೇ ಸೂತ್ರ’ ಎಂದು ವೀರಶೈವ ಪಂಚಮಸಾಲಿ ಪೀಠದ ನೂತನ ಶ್ರೀಗಳಾದ ವಚನಾನಂದ ಸ್ವಾಮೀಜಿ ನುಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲೌಕಿಕ ಸಂಬಂಧಗಳನ್ನು ತ್ಯಜಿಸಿ ಬಂದಿರುವ ನನಗೆ ಪಂಚಮಸಾಲಿ ಸಮಾಜದ ಜನರೇ ತಾಯಿ, ತಂದೆ ಇದ್ದಂತೆ’ ಎಂದರು.

‘ಕಬ್ಬಿನ ಗಿಡದ ಮೇಲೆ ಜೇನು ಕಟ್ಟಿದಾಗ, ಕಬ್ಬಿನ ರಸಕ್ಕೆ ಜೇನಿನ ರುಚಿ ಗೊತ್ತಿರುವುದಿಲ್ಲ. ಜೇನಿಗೆ ಕಬ್ಬಿನ ರಸದ ರುಚಿ ಗೊತ್ತಿರುವುದಿಲ್ಲ. ಅದಕ್ಕೆ ಕಬ್ಬಿನ ಮೇಲಿರುವ ಶಿಬಿರು ಅಡ್ಡವಿರುವುದೇ ಕಾರಣ. ಅಂತೆಯೇ ಭಕ್ತರು ಹಾಗೂ ಗುರುಗಳ ನಡುವೆ ಹಣ ಮತ್ತು ಅಹಂಕಾರ ಎಂಬ ಶಿಬಿರು ಅಡ್ಡವಿರುತ್ತದೆ. ಇಬ್ಬರೂ ಅದರಿಂದ ಮುಕ್ತಿ ಹೊಂದಿದಾಗ ಮಾತ್ರ ಸಮಾಜ ಬೆಳೆಯಲು ಸಾಧ್ಯ’ ಎಂದು ತಿಳಿಸಿದರು.

‘ಸಿದ್ಧಗಂಗಾ ಮಠದ ಶ್ರೀಗಳು ನನಗೆ ಆದರ್ಶ. ಅವರಂತೆ ತ್ರಿವಿಧ ದಾಸೋಹ ಪಂಚಮಸಾಲಿ ಮಠದಲ್ಲಿ ನಡೆಯಬೇಕು ಎಂಬುದು ನನ್ನ ಆಶಯ. ಮುಂದಿನ ದಿನಗಳಲ್ಲಿ ಮಠದಲ್ಲಿ ಹೋಮಿಯೋಪಥಿ, ಯೋಗಕೇಂದ್ರ, ಧ್ಯಾನ ನಡೆಸುವ ಮೂಲಕ ಸ್ವಸ್ಥ ಸಮಾಜ ನಿರ್ಮಿಸುವ ಗುರಿ ಇದೆ’ ಎಂದರು.

ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ‘ವಚನಾನಂದ ಸ್ವಾಮೀಜಿ 7ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದಿದ್ದರು. 80 ರಾಷ್ಟ್ರಗಳಲ್ಲಿ ಯೋಗ ಪ್ರದರ್ಶನ ನೀಡಿದ್ದಾರೆ. ಯೋಗ ತರಬೇತಿಯಿಂದ ಲಕ್ಷಾಂತರ ಹಣ ಸಂಪಾದಿಸಿ ಸುಖ ಜೀವನ ನಡೆಸಬಹುದಿತ್ತು. ಆದರೆ, ಅವರಿಗಿರುವ ಸಾಮಾಜಿಕ ಕಳಕಳಿಯಿಂದ ಈ ಸ್ಥಾನ ಅವರಿಗೆ ಒಲಿದು ಬಂದಿದೆ’ ಎಂದು ಹೇಳಿದರು.