ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್ ಅವರು ಹರ ಕ್ಷೇತ್ರ ಹರಿಹರ ದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಇಂದು ಭೇಟಿ ನೀಡಿದರು. ಕೆಲವು ದಿನಗಳ ಹಿಂದೆ ಅವರನ್ನು ಭೇಟಿಯಾಗುವ ಉದ್ದೇಶದಿಂದ ರಾಜಭವನಕ್ಕೆ ತೆರಳಿದ್ದ ಸಂದರ್ಭದಲ್ಲಿ ನಮ್ಮ ಯೋಗ ಸಾಧನೆ ಹಾಗೂ ಸಾಮಾಜಿಕ ಸುಧಾರಣೆಯ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ವಿಸ್ತೃತವಾಗಿ ಚರ್ಚೆ ನಡೆಸುವ ಅವಕಾಶವನ್ನು ಅವರು ನೀಡಿದ್ದರು. ಈ ಸಂದರ್ಭದಲ್ಲಿ ಹರ ಕ್ಷೇತ್ರ ಹರಿಹರಕ್ಕೆ ಭೇಟಿ ನೀಡುವಂತೆ ಅವರಲ್ಲಿ ಮನವಿಯನ್ನು ಮಾಡಿದ್ದೇವು. ಈ ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಹರ ಕ್ಷೇತ್ರಕ್ಕೂ ಭೇಟಿ ನೀಡುವ ಮೂಲಕ ನಮ್ಮ ಮನವಿಗೆ ಸ್ಪಂದಿಸಿ ಪ್ರೀತಿ ಆದರಗಳಿಂದ ಗೌರವಿಸಿದ್ದು ಬಹಳ ಸಂತಸ ತಂದಿತು.

ಹರ ಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಆಗಮಿಸಿದಂತಹ ರಾಜ್ಯಪಾಲರು ಇಲ್ಲಿಯ ವಾತಾವರಣವನ್ನು ಕಂಡು ಬಹಳಷ್ಟು ಸಂತಸಪಟ್ಟರು. ಹರ ಕ್ಷೇತ್ರದಲ್ಲಿ ಸಕಾರಾತ್ಮಕ ವಾದಂತಹ ಶಕ್ತಿ ಕಂಡು ಬಂದಿದ್ದನ್ನ ಖುಷಿಯಿಂದ ಹಂಚಿಕೊಂಡರು. ಈ ಕ್ಷೇತ್ರದಲ್ಲಿ ಇರುವಂತಹ ವಾತಾವರಣ ಸಿಖ್ ಸಂಪ್ರದಾಯದ ಗುರುದ್ವಾರದಲ್ಲಿ ಕಂಡುಬರುವಂತಹ ವಾತಾವರಣ ವಾಗಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಅನುಭವವನ್ನು ಹೊಂದಿರುವಂತಹ ಶ್ರೀ ವಚನಾನಂದ ಸ್ವಾಮೀಜಿ ಗಳು ತಮ್ಮ ಮುತುವರ್ಜಿಯಿಂದ ಕೈಗೊಂಡಿರುವಂತಹ ಕಾರ್ಯಕ್ರಮಗಳು ಶ್ರೀಪೀಠದ ಅಭಿವೃದ್ಧಿಗೆ ಕೈಗೊಂಡಿರುವಂತಹ ಕೆಲಸ-ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಠದ ಪರಂಪರೆಯ ಬಗ್ಗೆ ಇತಿಹಾಸದ ಬಗ್ಗೆ ಪಂಚಮಸಾಲಿ ಸಮಾಜದ ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.

ಮಹಾಯೋಗಿನಿ ಅಕ್ಕಮಹಾದೇವಿ,ಕಿತ್ತೂರಿನ ರಾಣಿ ಚೆನ್ನಮ್ಮ ,ಕೆಳದಿ ರಾಣಿ ಚೆನ್ನಮ್ಮ,ಬೆಳವಡಿ ರಾಣಿ ಮಲ್ಲಮ್ಮ,ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮೈಲಾರ ಮಹಾದೇವಪ್ಪ,ಅಕ್ಷರಯೋಗಿ ಅರಟಾಳ ರುದ್ರಗೌಡ,ಸರ್ ಕಂಬಳಿ ಸಿದ್ದಪ್ಪ,ಅದರಗುಂಚಿ ಶಂಕರಗೌಡ ಮುಂತಾದ ಮಹನೀಯರ ಬಗ್ಗೆ ಹಾಗೂ ಅವರ ಇತಿಹಾಸದ ಬಗ್ಗೆ ನಮ್ಮಿಂದ ಮಾಹಿತಿಯನ್ನು ಪಡೆದುಕೊಂಡು ರಾಜ್ಯಪಾಲರು ಪಂಚಮಸಾಲಿ ಸಮುದಾಯದ ವೀರ ಮಹಿಳೆಯರು ರಾಜ್ಯಕ್ಕೆ ನೀಡಿದಂತಹ ಕೊಡುಗೆಯನ್ನು ಶ್ಲಾಘಿಸಿದರು.

ನಮ್ಮ ಮನವಿಗೆ ಬೆಲೆಯನ್ನು ಕೊಟ್ಟು ತಮ್ಮ ಅಧಿಕೃತ ಕಾರ್ಯಕ್ರಮಗಳ ಮಧ್ಯೆ ಶ್ರೀಪೀಠಕ್ಕೆ ಭೇಟಿ ನೀಡಿದಂತಹ ರಾಜ್ಯಪಾಲರಿಗೆ ಮಹಾದೇವ ಉತ್ತಮ ಆಯುರಾರೋಗ್ಯವನ್ನು ನೀಡುವ ಮೂಲಕ ಇನ್ನಷ್ಟು ಸಮಾಜಸೇವೆಯನ್ನು ಮಾಡುವಂತಹ ಶಕ್ತಿಯನ್ನು ದಯಪಾಲಿಸಲಿ ಎನ್ನುವ ಹಾರೈಕೆ ನಮ್ಮದಾಗಿದೆ.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮೀಜಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ
ಹರ ಕ್ಷೇತ್ರ ಹರಿಹರ