"ಹಂಪಿಯಲ್ಲಿ ಸಂಭ್ರಮದ ಯೋಗ ದಿನಾಚರಣೆ"   "ಯೋಗ’ದ ಸಂಭ್ರಮದಲ್ಲಿ ಮಿಂದೆದ್ದ ಹಂಪಿ!"
 
2022 ಜೂ.21 ಹೊಸಪೇಟೆ(ವಿಜಯನಗರ), 
ಜೂ.21  ವಿಶ್ವಪಾರಂಪರಿಕ ತಾಣ ಹಂಪಿಯು ಮಂಗಳವಾರ ಯೋಗದ ಸಂಭ್ರಮದಲ್ಲಿ ಮಿಂದೆದ್ದಿತು. ಹಂಪಿಯ ಎಲ್ಲೆಡೆ ಯೋಗದ್ದೇ ಧ್ಯಾನ ಎನ್ನುವಂತಾಗಿತ್ತು. ಎದುರುಬಸವಣ್ಣ ಮಂಟಪದ ಎದುರುಗಡೆ ನಡೆದ ಯೋಗಾಭ್ಯಾಸ ಕಾರ್ಯಕ್ರಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಮಾನವಿಯತೆಗಾಗಿ ಯೋಗ ಎಂಬ ಘೋಷವ್ಯಾಕ್ಯದಡಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶ್ವಾಸಯೋಗಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕೇಂದ್ರ ಕಲ್ಲಿದ್ದಲು,ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದಜೋಶಿ,ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್, ಮುಜರಾಯಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ,ಸಂಸದ ವೈ.ದೇವೇಂದ್ರಪ್ಪ ಸೇರಿದಂತೆ ಅನೇಕರು ಯೋಗಾಭ್ಯಾಸ ಮಾಡಿದರು. ಇವರೊಂದಿಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ಈ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದ್ದು ವಿಶೇಷವಾಗಿತ್ತು.
 
ಹಕ್ಕಿಗಳ ಚಿಲಿಪಿಲಿ ಕಲರವ,ತಂಗಾಳಿ, ಚಳಿಯ ವಾತಾವರಣದ ನಡುವೆಯೇ ಬೆಳಗಿನ ಜಾವ 4 ಗಂಟೆಯಿಂದಲೇ ಯೋಗಾಭ್ಯಾಸಿಗಳು ಹೊಸಪೇಟೆ ನಗರ, ಕಮಲಾಪುರ ಪಟ್ಟಣ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧೆಡೆಯಿಂದ ಹಂಪಿಯೆಡೆ ಸಾಗಿಬಂದಿದ್ದು ವಿಶೇಷವಾಗಿತ್ತು. 60 ಸರಕಾರಿ ಬಸ್ಗಳು ಹಾಗೂ 40ಕ್ಕೂ ಹೆಚ್ಚು ಖಾಸಗಿ ಬಸ್ಗಳಲ್ಲಿ ಯೋಗಾಸಕ್ತರು,ವಿದ್ಯಾರ್ಥಿಗಳು,ಸಾರ್ವಜನಿಕರು ಬಂದು ಎದುರುಬಸವಣ್ಣ ಮಂಪಟದ ಎದುರುಗಡೆ ಹಾಕಲಾಗಿದ್ದ ಗ್ರೀನ್ ಮ್ಯಾಟ್ಗಳ ಮೇಲಿನ ಯೋಗ ಮ್ಯಾಟ್ಗಳ ಮೇಲೆ ಕುಳಿತು ಯೋಗಾಭ್ಯಾಸ ಮಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು,ಯುವಜನರು,ಮಧ್ಯವಯಸ್ಕರು,ವೃದ್ಧರು ಸೇರಿದಂತೆ ವಿವಿಧ ವಯೋಮಾನದವರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿಗಳು ಹೇಳಿಕೊಟ್ಟ ಯೋಗಾಸನಗಳನ್ನು ಮಾಡಿದರು.
ತಾಡಾಸನ,ವೃಕ್ಷಾಸನ, ಸುಖಾಸನ,ಪಾದ ಹಸ್ತಾಸನ, ಅರ್ಧಚಕ್ರಾಸನ, ತ್ರೀಕೋನಾಸನ,ದಂಡಾಸನ, ಅರ್ಧಉಷ್ಟ್ರಾಸನ,ಭದ್ರಾಸನ,ವಜ್ರಾಸನ,ಕಪಾಲ ಭಾತಿ,ಶಲಭಾಸನ ಸೇರಿದಂತೆ ವಿವಿಧ ಆಸನಗಳ ಮಹತ್ವ ತಿಳಿಸುತ್ತಾ ಆ ಆಸನಗಳನ್ನು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ನೆರೆದಿದ್ದವರಿಗೆ ಮಾಡಿಸಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ದೇಶದ 75 ಪಾರಂಪರಿಕ ಸ್ಥಳಗಳಲ್ಲಿ ಯೋಗ ಆಚರಣೆಗೆ ಕೇಂದ್ರ ಆಯುಷ್ ಮಂತ್ರಾಲಯ ನಿರ್ಧರಿಸಿತ್ತು;ಅದರಲ್ಲಿ ಹಂಪಿಯೂ ಒಂದು.
ಕೇಂದ್ರ ಆಯುಷ್ ಮಂತ್ರಾಲಯ, ಆಯುಷ್ ಇಲಾಖೆ, ಜಿಲ್ಲಾಡಳಿತ,ಜಿಪಂ,ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬೆಳಗ್ಗೆ ಏರ್ಪಡಿಸಿದ್ದ 08ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಗಣಿ,ಕಲ್ಲಿದ್ದಲ್ಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಯೋಗ ಪದ್ಧತಿಯ ಮಹತ್ವ ಇಂದು ಜಗತ್ತಿಗೆ ಅರಿವಾಗಿದ್ದು,ಜಗತ್ತಿನೆಲ್ಲೆಡೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ದೇಹ,ಮನಸ್ಸು ಮತ್ತು ಬುದ್ದಿಯನ್ನು ಸಮಚಿತ್ತದಲ್ಲಿಟ್ಟುಕೊಳ್ಳಲು ಯೋಗ ಮತ್ತು ಪ್ರಾಣಾಯಾಮ ಸಹಕಾರಿಯಾಗಿದೆ. ಈ ಯೋಗ ಮತ್ತು ಯೋಗಾಸನ ಎನ್ನುವುದು ಒಂದು ದಿನದ ಪ್ರಕ್ರಿಯೆಯಾಗದೇ ನಮ್ಮ ಜೀವನದ ಭಾಗವಾಗಬೇಕು ಎಂದರು.
 
ಭಾರತ ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ರಾಜಧಾನಿಯಾಗಿ ಪರಿವರ್ತಿತವಾಗುತ್ತಿದ್ದು;ಇದಕ್ಕೆ ನಮ್ಮ ಜೀವನ ಪದ್ಧತಿ ಕಾರಣ ಎಂದು ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವ ಜೋಶಿ ಅವರು ಯೋಗದಲ್ಲಿ ಇದಕ್ಕೆ ಪರಿಹಾರ ಇದೆ ಎಂದರು.
19 ನೇ ಶತಮಾನ ಇಂಗ್ಲೆಂಡ್,20ನೇ ಶತಮಾನ ಅಮೆರಿಕಾ ಆಗಿದ್ದಂತೆ 21 ನೇ ಶತಮಾನ ಭಾರತದ ಶತಮಾನ ಆಗಬೇಕು. ಇದಕ್ಕೆ ಯೋಗ ಬಹುದೊಡ್ಡ ಕೊಡುಗೆ ಕೊಡಬಲ್ಲದು ಎಂದು ಹೇಳಿದರು.
ವಿಶ್ವಸಂಸ್ಥೆ ಸೇರಿ ಇಡೀ ಜಗತ್ತಿನಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ.ಬ್ರಿಟಿಷರ ಕಾಲವನ್ನು ಸೂರ್ಯ ಮುಳುಗದ ಸಾಮ್ರಾಜ್ಯ ಎನ್ನುತ್ತಿದ್ದರು. ಈಗ ಸೂರ್ಯ ಹುಟ್ಟುತ್ತಿದ್ದಂತೆ ಅಲ್ಲದೆ, ದಿನದ 24 ಗಂಟೆಯೂ ಒಂದಾನೊಂದು ದೇಶದಲ್ಲಿ ಯೋಗ ಮಾಡುವಂತಾಗಿದೆ ಎಂದರು.
ಯೋಗ ಯೊಗಾಸನ ಬೇರೆ ಎಂಬುದರ ಕುರಿತು ಜನರಿಗೆ ಗೊತ್ತಿರಲಿಲ್ಲ. ಆಸನ ಯೋಗದ ಮೂಲಕ ಯೋಗಾಸನವಾಗುತ್ತದೆ. ಇಂಗ್ಲಿμï ಶಿಕ್ಷಣದ ಪ್ರಾರಂಭದ ನಂತರ ನಮ್ಮಲ್ಲಿ ಅದರ ಮೋಹ ಬಿದ್ದಿದೆ. ನಮ್ಮಲ್ಲಿ ಹೇಳಿದರೆ ನಂಬಲ್ಲ. ಪಾಶ್ಚಾತ್ಯರು ಹೇಳಿದರೆ ಕೆಲವರು ನಂಬುವ ಮಾನಸಿಕ ಸ್ಥಿತಿ ಉಳ್ಳವರಿದ್ದಾರೆ. ನಾವು ಕೋವಿಡ್ ಅನ್ನು ಯೋಗಾಸನ, ಪ್ರಾಣಾಯಮದ ಮೂಲಕ ಗೆಲ್ಲಲು ಸಾಧ್ಯ ಎಂಬುದನ್ನು ಇತ್ತೀಚಿನ ಕೋವಿಡ್ ಸಂದರ್ಭದಲ್ಲಿನ ಘಟನಾವಳಿಗಳು ಸ್ಪಷ್ಟಪಡಿಸಿರುವುದನ್ನು ಅವರು ತಿಳಿಸಿದರು.
 
ಶ್ವಾಸಗುರು ವಚನಾನಂದ ಸ್ವಾಮೀಜಿ ಅವರು ಕಳೆದ ಕೆಲ ವಾರಗಳಿಂದ ಹಂಪಿಯಲ್ಲಿ ಯೋಗ ಮಾಡುವುದರ ಮೂಲಕ ಯೋಗದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮುಜರಾಯಿ,ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಎಲ್ಲ ಅನುಕೂಲತೆಗಳಿದ್ದರೂ ಯಾರೊಬ್ಬರು ಅರೋಗ್ಯ, ಸಮಾಧಾನದಿಂದಿಲ್ಲ. ಇದಕ್ಕೆ ಯೋಗ ನೆಮ್ಮದಿ ಕೊಡುತ್ತದೆ. ಆದರೆ, ನಾವು ಇದನ್ನು ಮರೆಯುತ್ತಿದ್ದೇವೆ. ವಿದೇಶಿಗರು ಬಳಸಿಕೊಳ್ಳುತ್ತಿದ್ದಾರೆ. ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
 
ಸುಂದರ ಬದುಕಿಗೆ ಯೋಗ ಮದ್ದು. ಮಾನಸಿಕ ನೆಮ್ಮದಿಗೆ ಇದರ ಅಗತ್ಯವಿದೆ ಎಂದರು. ಜಿಲ್ಲಾಡಳಿತ ಒಳ್ಳೆಯ ರೀತಿಯಿಂದ ಕಾರ್ಯಕ್ರಮ ಸಂಘಟಿಸಿದೆ ಎಂದು ಶ್ಲಾಘಿಸಿದರು.
ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್ಸಿಂಗ್ ಮಾತನಾಡಿ, ಪುಣ್ಯಭೂಮಿ ಹಂಪಿಯಲ್ಲಿ ನಡೆಯುತ್ತಿರುವ ಯೋಗ ಎಲ್ಲರಿಗೂ ಅತ್ಯಗತ್ಯವಾಗಿದೆ. ಯೋಗ ಮಾಡು ಎಂದವರೂ ಕೂಡ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸೂಕ್ತ. ಹಾಗಾಗಿ ನಾನು ಇದನ್ನು ಮಾತಾಡಲು ಯೋಗ್ಯನೋ ಅಲ್ಲವೋ ಎಂಬುದು ಗೊತ್ತಿಲ್ಲ ಎಂದರು.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಕ್ಷಣವೂ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದು,ಅಂತ ಪ್ರಧಾನಿಗಳನ್ನು ಪಡೆದ ನಾವೇ ಪುಣ್ಯರು ಎಂದರು.
ಇದೇ ವೇಳೆ ಮೈಸೂರಿನಲ್ಲಿ ನಡೆದ ಪ್ರಧಾನಿಗಳ ಭಾಷಣದ ನೇರ ಪ್ರಸಾರವನ್ನು ನೆರೆದಿದ್ದವರು ವೀಕ್ಷಿಸಿದರು.
 
ಸಂಸದ ವೈ.ದೇವೇಂದ್ರಪ್ಪ, ಪದ್ಮಶ್ರೀ ಪುರಸ್ಕøತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅದ್ಯಕ್ಷೆ ಮಾತಾ ಮಂಜಮ್ಮ ಜೋಗತಿ,ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್, ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣ್ರಾವ್, ಎಸ್ಪಿ ಡಾ.ಕೆ.ಅರುಣ್, ಮಾತಂಗಬೆಟ್ಟದ ಸುವರ್ಣಾನಂದ ಸ್ವಾಮೀಜಿ, ಹಂಪಿ ಗ್ರಾ.ಪಂ. ಅಧ್ಯಕ್ಷೆ ಹಂಪಮ್ಮ, ಉಪಾಧ್ಯಕ್ಷೆ ಪದ್ಮಮ್ಮ, ಕನ್ನಡ ವಿವಿ ಕುಲಪತಿ ರಮೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ್ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧ ಯೋಗಸಂಸ್ಥೆಗಳು ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಶ್ವಾಸಯೋಗ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಖನಿಜ ನಿಧಿ ಅನುದಾನದಡಿ ಹೊರಗುತ್ತಿಗೆ ಅಡಿ ನೇಮಿಸಿಕೊಳ್ಳಲಾದ ವೈದ್ಯರಿಗೆ ಆದೇಶ ಪತ್ರಗಳನ್ನು ಹಾಗೂ ಪ್ರವಾಸಿ ತರಬೇತಿ ಪಡೆದವರಿಗೆ ಪ್ರಮಾಣಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.