ಪಂಚಮಸಾಲಿ 2ಎ ಮೀಸಲಿಗೆ ಮುಂದಡಿ ಇಟ್ಟ ಸರ್ಕಾರ; ಶೀಘ್ರದಲ್ಲೇ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಕೆ

ಪಂಚಮಸಾಲಿ ಸಮುದಾಯದ ಬಹುದಿನದ ಬೇಡಿಕೆಯಾದ 2ಎ ಮೀಸಲಾತಿ ಶೀಘ್ರ ಈಡೇರುವ ಸಾಧ್ಯತೆ ಇದೆ. ಶೀಘ್ರದಲ್ಲೇ ಕುಲಶಾಸ್ತ್ರೀಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ನಂತರ ಸರ್ಕಾರ ಮುಂದಿನ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆ ಮೂಡಿಸಿದೆ. ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಚನಾನಂದ ಶ್ರೀಗಳ ನಡುವೆ ಮಹತ್ವದ ಸಭೆಯಾಗಿದೆ.

 
ಹೈಲೈಟ್ಸ್‌:
* ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಮುಂದಡಿ ಇಟ್ದ ಸರ್ಕಾರ
* ಶೀಘ್ರದಲ್ಲೇ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಕೆ, ಸರ್ಕಾರದಿಂದ ಮುಂದಿನ ಕ್ರಮ ನಿರೀಕ್ಷೆ
* ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಚನಾನಂದ ಶ್ರೀಗಳ ಮಹತ್ವದ ಸಭೆ

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲು ಬೇಡಿಕೆ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸುತ್ತಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಈ ಕುರಿತ ವರದಿ ಸಲ್ಲಿಸುವ ಸಾಧ್ಯತೆಯಿದೆ. ನಂತರ ಸರಕಾರ ಮುಂದಿನ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆ ಮೂಡಿದೆ.

ಆಯೋಗ ನಡೆಸುತ್ತಿರುವ ಕುಲಶಾಸ್ತ್ರೀಯ ಅಧ್ಯಯನ ಮುಕ್ತಾಯ ಹಂತದಲ್ಲಿದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.

ಮಂಗಳವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದ ನಿಯೋಗ ವಿಸ್ತೃತವಾಗಿ ಚರ್ಚೆ ನಡೆಸಿತು. ಈ ವೇಳೆ ಸಿಎಂ ಆಯೋಗ ವರದಿ ಸಲ್ಲಿಸುತ್ತಿದ್ದಂತೆ ಮುಂದಿನ ಕ್ರಮವನ್ನು ತ್ವರಿತವಾಗಿ ಕೈಗೊಳ್ಳುವ ಭರವಸೆ ನೀಡಿದ್ದರು. ಇದರ ಮಧ್ಯೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೂ ಸರಕಾರ ಚರ್ಚಿಸಿದೆ. ಕುಲಶಾಸ್ತ್ರೀಯ ಅಧ್ಯಯನ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿರುವುದಾಗಿ ಆಯೋಗವು ಸರಕಾರಕ್ಕೆ ತಿಳಿಸಿದೆ ಎಂದು ಹೇಳಲಾಗಿದೆ.

''ಪಂಚಮಸಾಲಿ ಸಮುದಾಯವನ್ನು ಪ್ರವರ್ಗ- 2ಎಗೆ ಸೇರ್ಪಡೆ ಹಾಗೂ ಅಖಂಡ ವೀರಶೈವ ಲಿಂಗಾಯಿತರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ವಿಚಾರವಾಗಿ ವಿಶೇಷ ಸಭೆ ನಡೆಸಲಾಗಿದೆ. ಕಾನೂನಿನ ಅರಿವಿನ ಕಾರಣಕ್ಕೆ ನಾವು ಸರಕಾರಕ್ಕೆ ಗಡುವು ನೀಡಿಲ್ಲ. ಸಿಎಂ ಶೀಘ್ರವೇ ಮೀಸಲು ವಿಚಾರವಾಗಿ ಘೋಷಿಸಬೇಕು. ಇದಕ್ಕಾಗಿ ಮತ್ತೊಬ್ಬ ಸಿಎಂ ಬರುವ ಅವಶ್ಯಕತೆಯಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಬೇಡ,'' ಎಂದು ಸಿಎಂ ಭೇಟಿ ಬಳಿಕ ಮಾತನಾಡಿದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

''ಇತ್ತೀಚೆಗೆ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಪ್ರವರ್ಗ 2ಎ ಮೀಸಲು ಇಲ್ಲದ ಕಾರಣ ಸಮುದಾಯದ ಯಾರೊಬ್ಬರು ನೇಮಕವಾಗದೆ ಅನ್ಯಾಯವಾಗಿದೆ. ಹಾಗಾಗಿ ಮೀಸಲು ನೀಡಿ ಎಂದು ನಿರಂತವಾಗಿ ಮನವಿ ಮಾಡುತ್ತಲೇ ಇದ್ದೇವೆ. ಇದು ಕೊನೆಯ ಮನವಿ. ಮೀಸಲಾತಿ ನೀಡಿದರೆ ನಿಮಗೆ ಹಾಲು, ತುಪ್ಪದಲ್ಲಿಅಭಿಷೇಕ ಮಾಡುತ್ತೇವೆ. ನಮಗೆ ನೀವೇ ಸಾಕ್ಷಾತ್‌ ಬಸವಣ್ಣ,'' ಎಂದಿದ್ದಾರೆ.

''ಮೀಸಲು ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಜೋಕರ್‌ಗಳು, ಕಾಮಿಡಿಮನ್‌ಗಳು ಹುಟ್ಟುಕೊಂಡಿದ್ದಾರೆ. ನಾವು ಸರಕಾರದ ಪರವಾಗಿದ್ದೇವೆ, ಮುಖ್ಯಮಂತ್ರಿಗಳೊಂದಿಗೆ ಒಳಒಪ್ಪಂದವಿದೆ ಎಂದು ಮಾತುಗಳಿದ್ದು, ಇದಕ್ಕೆಲ್ಲಾ ಅವಕಾಶ ನೀಡಬಾರದು. 1994ರಿಂದ ನಡೆದಿರುವ ಹೋರಾಟಕ್ಕೆ ಸ್ಪಂದಿಸಿ ಮೀಸಲಾತಿ ನೀಡಬೇಕು. ಇದರಲ್ಲಿರಾಜಿ ಬೇಡ,'' ಎಂದು ತಿಳಿಸಿದರು.

ಕಾನೂನು ಬದ್ಧ ಪ್ರಕ್ರಿಯೆ
ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ''ಪಂಚಮಸಾಲಿಗಳಿಗೆ ಮೀಸಲು ನೀಡುವ ವಿಷಯದಲ್ಲಿಆಗುತ್ತಿರುವ ಒಳ್ಳೆಯ ಬೆಳವಣಿಗೆಗಳಿಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕಾರಣ.ಅವರು ಸಂಪುಟ ಉಪ ಸಮಿತಿ ರಚಿಸಿದ್ದರಿಂದ ಪ್ರಕ್ರಿಯೆ ಇಲ್ಲಿಯವರೆಗೆ ಬಂದು ನಿಂತಿದೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಅಗತ್ಯ ತಿದ್ದುಪಡಿ ಮೂಲಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೆಚ್ಚು ಅಧಿಕಾರ ನೀಡಿದರು. ಅದರಂತೆ ಸಮುದಾಯದ ಬೇಡಿಕೆಯನ್ನು ಆಯೋಗಕ್ಕೆ ಶಿಫಾರಸು ಮಾಡಲಾಗಿದ್ದು, ಆಯೋಗ ಕುಲಶಾಸ್ತ್ರೀಯ ಅಧ್ಯಯನ ಆರಂಭಿಸಿ ಮುಗಿಯುವ ಹಂತಕ್ಕೆ ಬಂದಿದೆ. ನಮ್ಮ ನಿರ್ಧಾರ ಸಂವಿಧಾನದ ಚೌಕಟ್ಟಿನೊಳಗೆ, ಕಾನೂನು ಬದ್ಧವಾಗಿರಬೇಕಾಗುತ್ತದೆ,'' ಎಂದು ಹೇಳಿದರು.

''ಶೀಘ್ರವಾಗಿ ವರದಿ ನೀಡುವಂತೆ ಆಯೋಗಕ್ಕೆ ಸೂಚಿಸಲಾಗಿದ್ದು, ವರದಿ ಪಡೆದು ಸಂಪುಟದಲ್ಲಿ ತೀರ್ಮಾನಿಸಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇವೆ. ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ವಿಚಾರವೂ ಸೇರಿದಂತೆ ಆಯೋಗವು ಸಮಗ್ರ ವರದಿ ನೀಡುವ ಸಾಧ್ಯತೆ ಇದೆ. ವರದಿ ಸಲ್ಲಿಕೆಯಾದ ನಂತರ ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಿ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು,'' ಎಂದು ಹೇಳಿದರು.