ಜ.14, 15 ರಂದು ಆಯೋಜಿಸಿದ್ದ ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ
ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜ. 14, 15 ರಂದು ಆಯೋಜಿಸಿದ್ದ ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ
ಹರಿಹರ ಗುರುಪೀಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಹಾಗೂ ದೇಶದಲ್ಲಿ ಓಮಿಕ್ರಾನ್ ಭೀತಿ ಜತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿಯಾವಳಿ ಪಾಲನೆ ಹಾಗೂ ಜನತೆಯ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನವನ್ನು ಇಂದು ಗುರುಪೀಠದಲ್ಲಿ ನಡೆದ ಸಮುದಾಯದ ಮುಖಂಡ ಸಭೆ ಕೈಗೊಂಡಿದೆ ಎಂದು ತಿಳಿಸಿದರು.
ಹರಿಹರ ಪೀಠದ ನಮ್ಮ ಹರಕ್ಷೇತ್ರದಲ್ಲಿ ಹರಜಾತ್ರೆ ಆಯೋಜಿಸುತ್ತಾ ಬರಲಾಗಿದೆ. ಆದರೆ ಓಮಿಕ್ರಾನ್ ಭೀತಿ ಹೆಚ್ಚಿದೆ, ಸರಕಾರ ಕೂಡ ಹಲವು ನಿಯಮಾವಳಿ ರೂಪಿಸಿ ನಿಬರ್ಂಧ ಹೇರಿದೆ. ನಮ್ಮ ಪೀಠ ಸರಕಾರದ ಜತೆ ಮತ್ತು ಜನರ ಜತೆ ಇರಲಿದೆ. ಹಾಗಾಗಿ ತಾತ್ಕಾಲಿಕ ಮುಂದೂಡಿಕೆಯ ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿನ ಹಾವಳಿ ಕಡಿಮೆಯಾದ ನಂತರ ಮುಂದಿನ ಹರಜಾತ್ರೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.
ಜಾತ್ರೆ ಎಂದರೆ ನೂರಾರು ವರ್ಷಗಳ ಇತಿಹಾಸವಿರುವ ಮಠಗಳಲ್ಲಿ ನಡೆಯುವ ತೇರು, ರಥೋತ್ಸವದ ಮಾದರಿ ನಮ್ಮ ಹರಜಾತ್ರೆಯಲ್ಲಿ ಇರುವುದಿಲ್ಲ.ಭಕ್ತರು, ಸಮುದಾಯವನ್ನು ಒಗ್ಗೂಡಿಸಲು ಜಾತ್ರೆ ಪದವನ್ನು ಮಾತ್ರೆ ತೆಗೆದುಕೊಂಡಿದ್ದೇವೆ. ಸಮಕಾಲೀನ ವಿಷಯಗಳ ಚರ್ಚೆ ಹರಜಾತ್ರೆಯಲ್ಲಿ ನಡೆಯಲಿದೆ. ಈ ಬಾರಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯೋಗ ನೀಡುವವರು ಮತ್ತು ಪಡೆಯುವವರ ಸೇರಿ ಉದ್ಯೋಗ ಮೇಳ ಹೀಗೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಹರಮಾಲೆ ಸಂಕಲ್ಪ ಸಮರ್ಪಣೆ
ಹರಜಾತ್ರೆ ಹಿನ್ನೆಲೆ ಹರಮಾಲೆ ಅಯೋಜಿಸಲಾಗಿತ್ತು, ಹಲವಾರು ಜನ 21 ದಿನದ ಹಿಂದೆ ಹರಮಾಲೆ ಧರಿಸಿದ್ದರು. ಜ. 14 ರಂದು ಇಲ್ಲಿಗೆ ಆಗಮಿಸುವ ಮಾಲಾಧಾರಿಗಳು ‘ಹರಮಾಲೆ ಸಂಕಲ್ಪ ಸಮರ್ಪಣೆ’ ಮಾಡಲಾಗುತ್ತಿತ್ತು. ಜಾತ್ರೆ ಮುಂದೂಡಿರುವುದರಿಂದ ಮಾಲಾಧಾರಿಗಳು ಅವರವರ ಮನೆಯಲ್ಲಿಯೇ ಹರಮಾಲೆ ಸಂಕಲ್ಪ ಸಮರ್ಪಣೆ ಮಾಡಬೇಕು. ಇನ್ಮುಂದೆ ರುದ್ರಾಕ್ಷಿ ಮಾಲೆ ತೊಟ್ಟು ಪ್ರತಿದಿನ ಹರಮಂತ್ರ ಪಠಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ಹರಜಾತ್ರೆ ಆಹ್ವಾನ ಪತ್ರಿಕೆ ನೋಡಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಳಿ ಮಠ, ಪಂಚಮಸಾಲಿ ಸಮಾಜ ಹಾಗೂ ನಮ್ಮ ಯೋಗದ ಬಗ್ಗೆ ಮಾಹಿತಿ ಪಡೆದು ಕರೆ ಮಾಡಿದ್ದರು. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಸಂಸತ್ ಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ನಾವು ಅವರಿಗೆ ನಮ್ಮ ಸಮಾಜದ ಬೆಳವಡಿ ರಾಣಿ ಮಲ್ಲಮ್ಮ ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ,ದಂಡಿ ಸತ್ಯಾಗ್ರಹದಲ್ಲಿ ಮಹಾತ್ಮಾಗಾಂಧೀಜಿ ಜತೆಯಲ್ಲಿದ್ದ ನಮ್ಮ ಮೈಲಾರ ಮಹಾದೇವ ಇವರೆಲ್ಲಾ ಪಂಚಮಸಾಲಿ ಸಮಾಜದವರು, ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಾವು ಮಾಹಿತಿ ನೀಡಿದೆ. ಹರಜಾತ್ರೆ ಮುಂದೂಡಲು ಅವರು ಸಲಹೆ ನೀಡಿದರು, ಮುಂದಿನ ಜಾತ್ರೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ನಾಗನಗೌಡ್ರು,ಪಿ ಡಿ ಶಿರೂರ, ಚಂದ್ರಶೇಖರ ಪೂಜಾರ,ಸೋಮನಗೌಡ ಪಾಟೀಲ,ಮಹೇಶ ಹಾವೇರಿ,ಪ್ರಕಾಶ್ ಪಾಟೀಲ,ಬಸವನಗೌಡ್ರು ತೊಂಡಿಹಾಳ, ಶ್ರೀಮತಿ ವಸಂತಾ ಹುಲ್ಲತ್ತಿ,ಸುನಂದಮ್ಮ,ಗೀತಮ್ಮ ಇತರರು ಇದ್ದರು.
ಪ್ರವರ್ಗ 2 (ಎ) ಮತ್ತು ಓಬಿಸಿ ಮೀಸಲಾತಿ ಪಡೆಯಲು ಪಂಚಮಸಾಲಿ ಸಮುದಾಯಕ್ಕೆ ಎಲ್ಲಾ ಅರ್ಹತೆಯಿದೆ: ವಚನಾನಂದ ಸ್ವಾಮೀಜಿಗಳು ವಿಕಾಸಸೌಧದಲ್ಲಿ ಮೀಸಲಾತಿ ಪರಾಮರ್ಶಿಸುವ ಉನ್ನತ ಮಟ್ಟದ ಸಮಿತಿಯ ಮುಂದೆವಾದ
ಪ್ರವರ್ಗ 2 (ಎ) ಮತ್ತು ಓಬಿಸಿ ಮೀಸಲಾತಿ ಪಡೆಯಲು ಪಂಚಮಸಾಲಿ ಸಮುದಾಯಕ್ಕೆ ಎಲ್ಲಾ ಅರ್ಹತೆಯಿದೆ: ವಚನಾನಂದ ಸ್ವಾಮೀಜಿಗಳು
ವಿಕಾಸಸೌಧದಲ್ಲಿ ಮೀಸಲಾತಿ ಪರಾಮರ್ಶಿಸುವ ಉನ್ನತ ಮಟ್ಟದ ಸಮಿತಿಯ ಮುಂದೆ ವಾದ
-ಪಂಚಮಸಾಲಿ ಮಠಾಧೀಶರ ಒಕ್ಕೂಟದ ಷ ಬ್ರ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬಬಲೇಶ್ವರ, ಶ್ರೀ ಷ ಬ್ರ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ,ಮನಗೂಳಿ ಹಾಗೂ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಇನ್ನಿತರ ಮಠಾಧೀಶರುಗಳು ಭಾಗಿ
-ಪಂಚಮಸಾಲಿ ಸಮಾಜದ ಹಿರಿಯರನ್ನ ಒಳಗೊಂಡ ನಿಯೋಗ ಕಚೇರಿಗೆ ಭೇಟಿ
-ವಕೀಲರಾದ ಶ್ರೀ. ಬಿ.ಎಸ್ ಪಾಟೀಲರಿಂದ ದಾಖಲೆಗಳ ಸಮರ್ಪಣೆ
ಬೆಂಗಳೂರು ಡಿಸೆಂಬರ್ 06: ರಾಜ್ಯದ ಪ್ರಮುಖ ಕೃಷಿಕ ಸಮುದಾಯವಾದ ಪಂಚಮಸಾಲಿ ಸಮುದಾಯ, ಪ್ರವರ್ಗ 2 (ಎ) ಹಾಗೂ ಓಬಿಸಿ ಮೀಸಲಾತಿ ಪಡೆಯಲು ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀ ಸುಭಾಷ್ ಆಡಿ ಅವರ ನೇತೃತ್ವದ ಸಮಿತಿ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಭರವಸೆ ವ್ಯಕ್ತಪಡಿಸಿದರು.
ಸೋಮವಾರ ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ 7 ರಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ರೀ ಸುಭಾಷ್ ಅಡಿ ಅವರ ಮೀಸಲಾತಿ ಪರಮಾರ್ಶಿಸುವ ಉನ್ನತ ಮಟ್ಟದ ಸಮಿತಿಯ ಮುಂದೆ ಸಮರ್ಥವಾದ ಮಂಡಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಇಂದು ನಿವೃತ್ತ ನ್ಯಾಯಮೂರ್ತಿ ಶ್ರೀ ಸುಭಾಷ್ ಅಡಿ ಅವರ ಮೀಸಲಾತಿ ಪರಾಮರ್ಶಿಸುವ ಉನ್ನತ ಸಮಿತಿ ನಮ್ಮ ವಾದವನ್ನು ಮಂಡಿಸುವಂತೆ ಆಹ್ವಾನ ನೀಡಿತ್ತು. ಈ ನಿಟ್ಟಿನಲ್ಲಿ ರಾಜ್ಯದ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಮಠಾಧೀಶರುಗಳು, ಬಬಲೇಶ್ವರದ ಶ್ರೀ ಷ ಬ್ರ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಮನಗೂಳಿಯ ಶ್ರೀ ಷ ಬ್ರ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಮಸಾಲಿ ಸಮುದಾಯದ ಹಿರಿಯರು ನೇತೃತ್ವದ ನಿಯೋಗ ಇಂದು ಭೇಟಿ ನೀಡಿ ನಮ್ಮ ವಾದ ಹಾಗೂ ಸೂಕ್ತ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದೇವೆ.
ಪ್ರಮುಖ ಕೃಷಿಕ ಸಮುದಾಯ ಆಗಿರುವ ಪಂಚಮಸಾಲಿಗಳಿಗೆ ಯಾವುದೇ ಮೀಸಲಾತಿ ಸಿಕ್ಕಿಲ್ಲ. ಲಿಂಗಾಯತ ಸಮುದಾಯದ ಇತರೆ ಉಪಪಂಗಡಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಪ್ರವರ್ಗ 2 (ಎ) ನಲ್ಲಿ ಅಥವಾ ಇತ್ತೀಚೆಗೆ ರಾಜ್ಯ ಸರಕಾರಗಳಿಗೆ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಅಧಿಕಾರವನ್ನು ಬಳಸಿಕೊಂಡು ಓಬಿಸಿ ಮೀಸಲಾತಿಯನ್ನ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸಮಿತಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ವಚನಾನಂದ ಸ್ವಾಮೀಜಿಗಳು ತಿಳಿಸಿದರು.
ಹಿರಿಯ ವಕೀಲರಾದ ಬಿ.ಎಸ್ ಪಾಟೀಲ್ ಮಾತನಾಡಿ, 1871 ರಿಂದ ಇಲ್ಲಿಯವರೆಗಿನ ಸುಮಾರು 35 ಕ್ಕೂ ಹೆಚ್ಚು ದಾಖಲೆಗಳನ್ನು ನಾವು ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದ ಸಮಿತಿಗೆ ನೀಡಿದ್ದೇವೆ. ಹಲವಾರು ದಶಕಗಳ ಬೇಡಿಕೆಯ ಫಲವಾಗಿ ಸರಕಾರ ಇಂದು ಸಮಿತಿಯನ್ನು ರಚನೆ ಮಾಡಿದೆ. ಅಲ್ಲದೆ, ಕೇಂದ್ರ ಸರಕಾರದ ಓಬಿಸಿ ಪಟ್ಟಿಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸುವಂತೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಓಬಿಸಿ ಪಟ್ಟಿಗೆ ಸೇರ್ಪಡೆಯ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಅರ್ಜಿಗಳು ರಾಜ್ಯಸರಕಾರಕ್ಕೆ ವರ್ಗಾವಣೆ ಆಗಿದ್ದು ಓಬಿಸಿ ಮೀಸಲಾತಿ ಸಿಗುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.
ಗಮನ ಸೆಳೆದ ಪಂಚಮಸಾಲಿ ಮಠಾಧೀಶರುಗಳ ಉಪಸ್ಥಿತಿ:
ರಾಜ್ಯದ ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸುವ ಸುಮಾರು 15 ಕ್ಕೂ ಹೆಚ್ಚು ಸ್ವಾಮೀಜಿಗಳು ನಿಯೋಗದಲ್ಲಿ ಪಾಲ್ಗೊಂಡಿದ್ದರು. ಪ್ರಮುಖವಾಗಿ, ಷ ಬ್ರ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬಬಲೇಶ್ವರ, ಶ್ರೀ ಷ ಬ್ರ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಮನಗೂಳಿ,ಶ್ರೀ ಬಸವರಾಜ ದಿಂಡೂರ,ಶ್ರೀ ಸೋಮನಗೌಡ ಪಾಟೀಲ,ಶ್ರೀ ಚಂದ್ರಶೇಖರ ಪೂಜಾರ,ಶ್ರೀಮತಿ ವಸಂತ ಹುಲ್ಲತ್ತಿ ಸಭೆಯಲ್ಲಿ ಉಪಸ್ಥಿತರಿದ್ದರು. ಒಗ್ಗಟ್ಟಿನಲ್ಲಿ ತಮ್ಮ ವಾದವನ್ನು ಮಂಡಿಸಿದ್ದು ಎಲ್ಲರ ಗಮನ ಸೆಳೆಯಿತು.
ಶಿಗ್ಗಾವಿಯಲ್ಲಿ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭ
ಶಿಗ್ಗಾವಿಯಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಕರ್ನಾಟಕ ಘನಸರ್ಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಹಾಕಿದರು.
In the presence of Jagadguru Sri Sri Sri Vachananand Swamiji, Panchamasali Jagadguru Peetha,Harihar Chief Minister Of Karnataka Sri Basavaraj Bommai lays foundation stone for Panchamasali Convention Centre in Shiggaon.
----------------------------------------------
ಯುವ ಪೀಳಿಗೆಯಲ್ಲಿ ಒಳ್ಳೆಯ ಅಭ್ಯಾಸಗಳನ್ನು ಬೆಳೆಸುವ ಗುರಿಯಲ್ಲಿ ಹರಮಾಲೆ ಯಶಸ್ವಿಯಾಗಲಿ: ಸಿಎಂ ಬಸವರಾಜ್ ಬೊಮ್ಮಾಯಿ ಹರಿಹರ ಜಗದ್ಗುರು ಪೀಠದಿಂದ ಪ್ರಾರಂಭಿಸಲಾಗಿರುವ ಹರಮಾಲಾ ಯಾತ್ರೆಯ ಲೋಗೋ ಹಾಗು ಬ್ಯಾನರ್ ಬಿಡುಗಡೆ
.
ಯುವ ಪೀಳಿಗೆಯಲ್ಲಿ ಒಳ್ಳೆಯ ಅಭ್ಯಾಸಗಳನ್ನು ಬೆಳೆಸುವ ಗುರಿಯಲ್ಲಿ ಹರಮಾಲೆ ಯಶಸ್ವಿಯಾಗಲಿ: ಸಿಎಂ ಬಸವರಾಜ್ ಬೊಮ್ಮಾಯಿ ಹರಿಹರ ಜಗದ್ಗುರು ಪೀಠದಿಂದ ಪ್ರಾರಂಭಿಸಲಾಗಿರುವ ಹರಮಾಲಾ ಯಾತ್ರೆಯ ಲೋಗೋ ಹಾಗು ಬ್ಯಾನರ್ ಬಿಡುಗಡೆ
ಬೆಂಗಳೂರು ಡಿಸೆಂಬರ್ 09: ಹರಜಾತ್ರೆಯಲ್ಲಿ ಪಾಲ್ಗೊಳ್ಳುವ ಯುವ ಹಾಗೂ ಉತ್ಸಾಹಿ ಜನರಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವ ಹಾಗೂ ಮಾನಸಿಕ ಸ್ಥೈರ್ಯಗಳನ್ನು ಹೆಚ್ಚಿಸುವ ಉದ್ದೇಶದಲ್ಲಿ ಹರಮಾಲೆ ಯಶಸ್ವಿಯಾಗಲಿ ಎಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾರೈಸಿದರು.
ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಹರಿಹರ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಹರಮಾಲೆ ಕಾರ್ಯಕ್ರಮದ ಲೋಗೋ ಹಾಗೂ ಬ್ಯಾನರ್ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸುವ, ಪರಂಪರೆಯನ್ನು ಮುಂದುವರೆಸುವ ಹಾಗೂ ಹೊಸತನ್ನು ತಿಳಿಸಿಕೊಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಹರಜಾತ್ರೆಯ ಮೂಲಕ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಒಗ್ಗೂಡಿಸಿ ಹಲವಾರು ಅತ್ಯವಶ್ಯಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಬಾರಿ ಸಮುದಾಯದ ಉತ್ಸಾಹಿ ಯುವಕರಲ್ಲಿ ಮತ್ತಷ್ಟು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ, ಒಳ್ಳೆಯ ಅಭ್ಯಾಸಗಳನ್ನು ಅವರ ಜೀವನದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹರಮಾಲೆ ವೃತವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದಾರೆ. ಈ ವೃತದಲ್ಲಿ ನಿಷ್ಠರಾಗಿ ಪಾಲ್ಗೊಳ್ಳುವ ಮೂಲಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಯುವಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಹರಿಹರ ಜಗದ್ಗುರು ಪೀಠದ ವಚನಾನಂದ ಮಹಾಸ್ವಾಮೀಜಿಗಳು ಮಾತನಾಡಿ, ಅಂಧಕಾರವನ್ನು ಹೋಗಲಾಡಿಸುವ ಜವಾಬ್ದಾರಿ ಎಲ್ಲಾ ಗುರುಪೀಠದ್ದಾಗಿರುತ್ತದೆ. ಜಗದ್ಗುರುಗಳದ್ದಾಗಿರುತ್ತದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಎಲ್ಲಾ ಸ್ವಾಮೀಜಿಗಳ ಮೂಲ ಕರ್ತವ್ಯ. ಹರಿಹರ ಪಂಚಮಸಾಲಿ ಜಗದ್ಗುರು ಪೀಠ ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟು ಸಾಗುತ್ತಿದೆ. ಕೇವಲ ಪಂಚಮಸಾಲಿಗಳಲ್ಲ ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನ ಹರಿಹರ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಬಂದು ಹರನನ್ನ ಭಕ್ತಿಯಿಂದ ಆರಾಧಿಸುತ್ತಾರೆ. ಜಗದ್ಗುರು ಮಹಾಸನ್ನಿಧಿಯವರ ಆಶೀರ್ವಾದ ಪಡೆಯುತ್ತಾರೆ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಕೈಂಕರ್ಯದಲ್ಲಿ ನಮ್ಮದು ಅಳಿಲು ಸೇವೆಯಾಗಿದೆ.
ನಾವು ಪೀಠಕ್ಕೆ ಬರುವ ಸಾವಿರ ಸಾವಿರ ಯುವಮನಸುಗಳನ್ನು ಬಹಳ ಹತ್ತಿರದಿಂದ ಗಮನಿಸಿದ್ದೇವೆ. ಅವರಲ್ಲಿ ಅಪಾರ ಬುದ್ಧಿ ಶಕ್ತಿ ಇರುತ್ತದೆ. ಯುಕ್ತಿ ಇರುತ್ತದೆ. ಪ್ರತಿಭೆಯ ಜೊತೆಗೆ ಏನಾದರೂ ಸಾಧಿಸಬೇಕು ಅನ್ನೋ ಅತೀವ ಹಂಬಲವಿರುತ್ತದೆ. ಆದರೆ ಕೆಲವರು ಬೇಕೋಬೇಡವೋ ಯಾವುದೋ ಒಂದು ಚಟಕ್ಕೆ ದಾಸರಾಗಿರುತ್ತಾರೆ. ಮಾನಸಿಕವಾಗಿ ಸ್ಥೈರ್ಯ ಗುಂದಿರುತ್ತಾರೆ. ಸಣ್ಣಪುಟ್ಟ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುತ್ತಾರೆ. ಅಂತಃಕರಣ, ಪ್ರೀತಿ ಗೌರವ ಕಳೆದುಕೊಂಡಿರುತ್ತಾರೆ. ಅಯ್ಯೋ ನನಗಿನ್ನೂ ಯಶಸ್ಸು ಸಿಕ್ಕಿಲ್ಲವಲ್ಲ ಅಂತ ಹಪಹಪಿಸುತ್ತಿರುತ್ತಾರೆ. ಜೀವನದ ಹೊಸ್ತಿಲಿನಲ್ಲೇ ಗೊಂದಲಕ್ಕೀಡಾಗಿರುವ ಅಂಥ ಲಕ್ಷಲಕ್ಷ ಯುವಮನಸುಗಳನ್ನು ಸರಿದಾರಿಗೆ ತರುವ ಹೊಣೆ ನಮ್ಮ ಮೇಲಿದೆ. ಅಧ್ಯಾತ್ಮದ ತೆಕ್ಕೆಗೆ ಅವರನ್ನು ತಂದು, ಹರಸಂಕಲ್ಪ ಮಾಡಿಸಿ ಜೀವನ ಪಯಣಕ್ಕೆ ಹೊಸ ದಾರಿ ತೋರಿಸಬೇಕು. ಆ ಹೊಣೆಯನ್ನು ಅರಿತೇ ನಾವು ಪವಿತ್ರವಾದ ಹರಜಾತ್ರಾ ಮಹೋತ್ಸವದಂದು ಹರಮಾಲೆ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ.
ಹರಮಾಲೆ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಮತ್ತೊಂದು ದೂರದೃಷ್ಟಿಯ ಸಂಕಲ್ಪ. ಸಾಮಾಜಿಕ ಬದಲಾವಣೆಯಲ್ಲಿ ಹರಮಾಲೆ ಬಹಳ ದೊಡ್ಡ ಪಾತ್ರ ವಹಿಸುತ್ತದೆ ಎಂದೇ ನಾವು ನಂಬಿದ್ದೇವೆ. ನಡತೆ ತಪ್ಪಿದವರನ್ನು ತಿದ್ದುವ, ದುಶ್ಚಟಗಳಿಗೆ ದಾಸರಾದವರನ್ನು ಅದರಿಂದ ಮುಕ್ತಿಗೊಳಿಸುವ, ಧೂಮಪಾನ- ಮದ್ಯಪಾನದಂಥ ಸಾಮಾಜಿಕ ಪಿಡುಗುಗಳಿಗೆ ತಿಲಾಂಜಲಿ ಇಡುವ, ಎಲ್ಲಕ್ಕಿಂತ ಹೆಚ್ಚಾಗಿ ಸಮಾಜವನ್ನು ಒಳ್ಳೆಯ ಮನಸ್ಸುಗಳಿಂದ ನಿರ್ಮಿಸುವ, ಆತ್ಮಶುದ್ಧೀಕರಿಸುವ ಮಹಾಸಂಕಲ್ಪ ಹರಜಾತ್ರೆಯ ಹಿಂದಿದೆ. ಅದಕ್ಕಾಗಿ ಯುವಮನಸುಗಳು ೨೧ ದಿನಗಳ ಕಾಲ ಅತ್ಯಂತ ಕಟ್ಟುನಿಟ್ಟಾಗಿ ಹರಮಾಲೆ ವ್ರತವನ್ನು ಕೈಗೊಳ್ಳಬೇಕು. ಹರನಿಗೆ ಭಕ್ತಿ ನಿಷ್ಟೆಯಿಂದ ಕಾಯಾ ವಾಚಾ ಮನಸಾ ನಡೆದುಕೊಳ್ಳಬೇಕು. ಆಗಮಾತ್ರ ಸಂಕಲ್ಪ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಶ್ರೀ ಬಿ.ನಾಗನಗೌಡರು, ನಿಕಟಪೂರ್ವ ರಾಜ್ಯಾಧ್ಯಕ್ಷ ಶ್ರೀ ಬಸವರಾಜ್ ದಿಂಡೂರು,
ಪಂಚಮಸಾಲಿ ಪೀಠ ಪ್ರಧಾನ ಧರ್ಮದರ್ಶಿ ಶ್ರೀ ಬಿ.ಸಿ.ಉಮಾಪತಿ,ಪ್ರಧಾನ ಕಾರ್ಯದರ್ಶಿ ಶ್ರೀ ಸಿದ್ದೇಶ ಹನಶಿ,ಶ್ರೀ ಚಂದ್ರಶೇಖರ ಪೂಜಾರ,ಶ್ರೀ ಸೋಮನಗೌಡ ಪಾಟೀಲ,ಶ್ರೀಮತಿ ವಸಂತ ಹುಲ್ಲತ್ತಿ ,ವಕೀಲರಾದ ಶ್ರೀ ಬಿ.ಎಸ್.ಪಾಟೀಲರು ಮುಂತಾದವರು ಉಪಸ್ಥಿತರಿದ್ದರು.